ಥೈರಟ್ರಾನ್ -
ರೇಡಿಯೊಗಳಲ್ಲಿ ಬಳಸುವ ಟ್ರಯೋಡ್, ಟೆಟ್ರೋಡ್ ಮುಂತಾದ ಎಲೆಕ್ಟ್ರಾನಿಕ್ ನಳಿಕೆಗಳಂತಿರುವ, ಆದರೆ ಅನಿಲಪೂರಿತವಾದ ಶಾಖಾಯಾನಿಕ್ ಸಾಧನ. ಇದರಲ್ಲಿ ಮೂರು ಅಥವಾ ಹೆಚ್ಚಿನ ಸಂಖ್ಯೆಯ ಎಲೆಕ್ಟ್ರೋಡುಗಳಿವೆ: ಕ್ಯಾಥೋಡ್, ಆ್ಯನೋಡ್ ನಿಯಂತ್ರಕ ಜಾಲ ಮತ್ತು ಪರದೆ ಜಾಲ. ಕ್ಯಾಥೋಡಿನ ಹತ್ತಿರ ಬೇರಿಯಮ್ ಮತ್ತು ಸ್ಟ್ರಾನ್ಷಿಯಮ್ ಆಕ್ಸೈಡುಗಳನ್ನು ನಿಕಲ್ ಲೋಹದ ಮೇಲೆ ಲೇಪಿಸಿ ಕಾಸಿದಾಗ ಸಾಕಷ್ಟು ಪ್ರಮಾಣದಲ್ಲಿ ಎಲೆಕ್ಟ್ರಾನುಗಳನ್ನು ಒದಗಿಸುವ ತಂತುವಿದೆ. 

ಚಿತ್ರ-1

ಮೂರು ಎಲೆಕ್ಟ್ರೋಡುಗಳ ಒಂದು ನಳಿಕೆಯ ರಚನೆಯ ರೂಪವನ್ನು ಚಿತ್ರ (1ಚಿ)ಯಲ್ಲೂ ಅದರ ಸಾಂಕೇತಿಕ ರೂಪವನ್ನು ಚಿತ್ರ (1b)ಯಲ್ಲೂ ತೋರಿಸಿದೆ. ಕ್ಯಾಥೋಡಿನ ಬಳಿಯಿರುವ ಸೂಕ್ಷ್ಮತಂತುವನ್ನು 6.3 ವೋಲ್ಟ್ ಪರ್ಯಾಯ ವಿದ್ಯುತ್ಪ್ರವಾಹದಿಂದ ಕಾಸಿದರೆ ಅಲ್ಪಶಕ್ತಿಯ ಎಲೆಕ್ಟ್ರಾನುಗಳು ಹೊರ ಹೊಮ್ಮುವುವು. ಆ್ಯನೋಡಿಗೆ ಧನ ವೋಲ್ಟೇಜನ್ನು ಆರೋಪಿಸಿ ಅವುಗಳ ಶಕ್ತಿಯನ್ನು ವರ್ಧಿಸಬಹುದು. ಈ ಎಲೆಕ್ಟ್ರಾನುಗಳು ಆ್ಯನೋಡನ್ನು ತಲುಪಲು ಮಧ್ಯೆ ಇರುವ ಅನಿಲದ ಮೂಲಕ ಹಾದುಹೋಗಬೇಕು. ಹೀಗೆ ಹಾದುಹೋಗುವಾಗ ಎಲೆಕ್ಟ್ರಾನುಗಳು ತಮ್ಮ ಪಥದಲ್ಲಿರುವ ಅಣು, ಪರಮಾಣುಗಳೊಡನೆ ಸಂಘಟ್ಟನೆಗೊಂಡು ತಮ್ಮ ಶಕ್ತಿಯನ್ನು ಕಳೆದುಕೊಳ್ಳುತ್ತವೆ. ಇವು ಸ್ಥಿತಿಸ್ಥಾಪಕ ಹಾಗೂ ಅಸ್ಥಿತಿಸ್ಥಾಪಕ ಸಂಘಟ್ಟನೆಗಳು. ಆ್ಯನೋಡಿನ ಮೇಲೆ ವೋಲ್ಟೇಜು ಇಲ್ಲದಿದ್ದರೆ ಎಲೆಕ್ಟ್ರಾನುಗಳ ಶಕ್ತಿವೃದ್ಧಿ ಹೆಚ್ಚಿಗೆ ಆಗಲಾರದು. ಆಗ ಕ್ರಮೇಣ ಎಲೆಕ್ಟ್ರಾನುಗಳು ತಮ್ಮ ಶಕ್ತಿಯನ್ನು ಕಳೆದುಕೊಂಡು ಆ್ಯನೋಡನ್ನು ತಲುಪಲಾರವು. ಅಂದರೆ ಹೊರ ವಿದ್ಯುನ್ಮಂಡಲದಲ್ಲಿ ಅಥವಾ ನಳಿಕೆಯ ಮೂಲಕ ವಿದ್ಯುತ್ಫ್ರವಾಹ ಇರುವುದಿಲ್ಲ. ಆ್ಯನೋಡಿನ ಮೇಲಣ ವೋಲ್ಟೇಜನ್ನು ಹೆಚ್ಚಿಸಿದರೆ ಎಲೆಕ್ಟ್ರಾನುಗಳನ್ನು ವೇಗೋತ್ಕರ್ಷಿಸಬಹುದು. ಅಣು, ಪರಮಾಣುಗಳಲ್ಲಿರುವ ಎಲೆಕ್ಟ್ರಾನುಗಳು ನಿರ್ದಿಷ್ಟ ಶಕ್ತಿಯಲ್ಲಿ ಬಂಧಿತವಾಗಿರುವುವು. ಈ ನಿರ್ದಿಷ್ಟ ಶಕ್ತಿಯನ್ನು ಸಂಘಟ್ಟನೆಯಿಂದ ಬಂಧಿತ ಎಲೆಕ್ಟ್ರಾನುಗಳಿಗೆ ಒದಗಿಸಿ ಕೊಟ್ಟರೆ ಅಥವಾ ಅನಿರ್ದಿಷ್ಟ ಶಕ್ತಿಗಿಂತ ಹೆಚ್ಚಿಗೆ ಒದಗಿಸಿದರೆ ಬಂಧಿತ ಎಲೆಕ್ಟ್ರಾನುಗಳು ಮುಕ್ತಗೊಳ್ಳುವುವು. ಈ ಕ್ರಿಯೆಗೆ ಅನಿಲದ ಅಯಾನೀಕರಣ ಎಂದು ಹೆಸರು.

	ಮೇಲೆ ತಿಳಿಸಿದಂತೆ ಆ್ಯನೋಡಿನ ಮೇಲೆ ಹೆಚ್ಚು ಹೆಚ್ಚು ಧನ ವೋಲ್ಟೇಜನ್ನು ಆರೋಪಿಸಿ ಎಲೆಕ್ಟ್ರಾನುಗಳನ್ನು ವೇಗೊತ್ಕರ್ಷಿಸಿ ಅವುಗಳ ಶಕ್ತಿಯನ್ನು ಅನಿಲ ಆಯಾನೀಕರಣ ಮಾಡಬಲ್ಲ ಹಂತಕ್ಕೆ ತರಬಹುದು. ವೇಗೋತ್ಕರ್ಷಗೊಂಡ ಎಲೆಕ್ಟ್ರಾನುಗಳ ವೇಗವನ್ನು ಜಾಲದ ಮೇಲೆ ಋಣ ವೋಲ್ಟೇಜು ಆರೋಪಣೆಯಿಂದ ನಿಯಂತ್ರಿಸಬಹುದು. ಅಂದರೆ ಜಾಲ ಒಂದು ನಿಯಂತ್ರಕ ಎಲೆಕ್ಟ್ರೋಡ್ ಆಗುವುದು. ಜಾಲದ ಮೇಲೆ ಸೊನ್ನೆ ವೋಲ್ಟೇಜು ಇದ್ದರೆ ಯಾವುದೋ ನಿರ್ದಿಷ್ಟ ಆ್ಯನೋಡ್ ವೋಲ್ಟೇಜಿನಲ್ಲಿ ಅನಿಲದ ಆಯಾನೀಕರಣ ಪ್ರಾರಂಭವಾಗುವುದು. ಈಗ ಋಣ ಅಯಾನುಗಳು ಆ್ಯನೋಡಿನ ಕಡೆಗೂ ಧನ ಅಯಾನುಗಳು ಕ್ಯಾಥೋಡಿನ ಕಡೆಗೂ ಚಲಿಸುತ್ತ ವಿದ್ಯುನ್ಮಂಡಲದಲ್ಲಿ ವಿದ್ಯುತ್ಪ್ರವಾಹ ಗೋಚರಿಸುತ್ತದೆ. ನಳಿಕೆಯಲ್ಲಿನ ಅನಿಲ ಆಯಾನೀಕರಣಗೊಳ್ಳುವ ಈ ಆ್ಯನೋಡ್ ವೋಲ್ಟೇಜಿಗೆ ಕಿಡಿ ವೋಲ್ಟೇಜ್ ಎಂದು ಹೆಸರು. ಇದು ನಳಿಕೆಯೊಳಗೆ ತುಂಬಿರುವ ಅನಿಲ ಹಾಗೂ ನಳಿಕೆಯ ರಚನೆಯನ್ನು ಅನುಸರಿಸಿ 6ರಿಂದ40 ವೋಲ್ಟ್‍ವರೆಗೆ ಇರುವುದು. ಜಾಲವೋಲ್ಟೇಜನ್ನು (ಗಿg) ಹೆಚ್ಚು ಹೆಚ್ಚು ಋಣವಾಗಿಸುವುದರಿಂದ ಅಯಾನೀಕರಣಗೊಳಿಸಲು ಆ್ಯನೋಡಿನ ಮೇಲೆ (ಗಿಚಿ) ಹೆಚ್ಚು ಹೆಚ್ಚು ಧನ ವೋಲ್ಟೇಜನ್ನು ಆರೋಪಿಸಬೇಕೆಂದು ವಿದಿತವಾಗುವುದು. 

ಚಿತ್ರ-2

ಇದನ್ನು ಚಿತ್ರ(2)ರಲ್ಲಿ ಕಾಣಬುದು. ವಿವಿಧ ಜಾಲ ವೋಲ್ಟೇಜಿನಲ್ಲಿ (ಗಿg) ಕಿಡಿವೋಲ್ಟೇಜು ಎಷ್ಟೆಂಬುದನ್ನು ಚಿತ್ರದಿಂದ ತಿಳಿಯಬಹುದು. ಗಿgಯು ಆಯಾನೀಕರಣ ವೋಲ್ಟೇಜನ್ನು ನಿರ್ಧರಿಸಿದರೂ ಅಯಾನೀಕರಣವಾದ ಬಳಿಕ ಅದು ತನ್ನ ನಿಯಂತ್ರಕ ಸ್ಥಾನವನ್ನು ಕಳೆದುಕೊಳ್ಳುತ್ತದೆ. ಆಗ ಪುನಃ ಆ್ಯನೋಡ್ ವೋಲ್ಟೇಜನ್ನು ಸೊನ್ನೆ ಅಥವಾ ಋಣವಾಗುವಂತೆ ಮಾಡಿದ ಅಯಾನೀಕರಣ ನಿಂತು ಜಾಲ ತನ್ನ ನಿಯಂತ್ರಕ ಸ್ಥಾನವನ್ನು ಪುನಃಗಳಿಸುತ್ತದೆ. ಈ ಸಂದರ್ಭದಲ್ಲಿ ಅನಿಲವು ನಿರಯಾನೀಕರಣಗೊಳ್ಳಬೇಕಾದರೆ (ಡೀ ಅಯೊನೈಸೇಷನ್) ಸ್ವಲ್ಪಕಾಲ ತೆಗೆದುಕೊಳ್ಳುವುದು. ಸಾಮಾನ್ಯವಾಗಿ ಇದು ಒಂದು ಮಿಲಿಸೆಕೆಂಡು (0.001). ಕೆಲವು ವಿಶೇಷ ರೀತಿಯ ಕೊಳವೆಗಳಲ್ಲಿ ಈ ಕಾಲ 10 ಮೈಕ್ರೊಸೆಕೆಂಡು(0.00001 ಸೆಕೆಂಡು) ಆಗಿರುವುದು. 

ಚಿತ್ರ-3

	ನಾಲ್ಕು ಎಲೆಕ್ಟ್ರೋಡುಗಳಿರುವ ಥೈರಟ್ರಾನನ್ನು ಚಿತ್ರ (3)ರಲ್ಲಿ ಸಾಂಕೇತಿಕವಾಗಿ ತೋರಿಸಿದೆ. ಕವಚಜಾಲದ (ಷೀಲ್ಡ್ ಗ್ರಿಡ್) ಮೇಲೆ ಸಾಕಷ್ಟು ಋಣ ವೋಲ್ಟೇಜನ್ನು ಆರೋಪಿಸುವುದರಿಂದ ನಳಿಕೆಯ ಮೂಲಕ ವಿದ್ಯುತ್ತು ಹರಿಯಲು ನಿಯಂತ್ರಕ ಜಾಲದ ಮೇಲೆ ಧನ ವೋಲ್ಟೇಜನ್ನು ಆರೋಪಿಸಬೇಕು. ಈ ವ್ಯವಸ್ಥೆಯ ಅನುಕೂಲತೆಯೆಂದರೆ ನಳಿಕೆಯಲ್ಲಿ ವಿದ್ಯುತ್‍ವಹನ ಪ್ರಾರಂಭಿಸಲು ನಿಯಂತ್ರಕ ಜಾಲದಲ್ಲಿ ಅಲ್ಪ ವಿದ್ಯುತ್ ಪ್ರವಾಹವಿದ್ದರೆ ಸಾಕು. 

	ಥೈರಟ್ರಾನಿನ ಅಯಾನೀಕರಣ ಕಾಲವೆಂದರೆ ನಿರ್ದಿಷ್ಟ ಜಾಲವೋಲ್ಟೇಜಿಗೆ ನಳಿಕೆಯಲ್ಲಿ ವಿದ್ಯುತ್ ಕಿಡಿಯನ್ನು ಪ್ರಾರಂಭಿಸಬೇಕಾದ ಕಾಲ. ನಳಿಕೆಯ ರಚನೆ ಹಾಗೂ ಇದರಲ್ಲಿ ತುಂಬಿರುವ ಅನಿಲವನ್ನು ಅನುಸರಿಸಿ ಈ ಅಯಾನೀಕರಣ ಕಾಲ ಸುಮಾರು 0.5ರಿಂದ 10 ಮೈಕ್ರೊಸೆಕೆಂಡು ಇರುವುದು. 

	ಥೈರಟ್ರಾನುಗಳನ್ನು ಟಪ್ಪೆ(ರಿಲೇ) ಆಥವಾ ಸ್ವಯಂಚಾಲಿತ ಸ್ವಿಚ್‍ಗಳಂತೆ ಬಳಸಬಹುದು. ವಿದ್ಯುತ್ ಕುಲುಮೆಗಳ ರೇಚಕ ಅಥವಾ ವಿದ್ಯುತ್ ಬೀಸಣಿಗೆಗಳನ್ನು ನಿಯಂತ್ರಿಸಲು ಮುಚ್ಚು-ತೆರೆ(ಆನ್-ಆಫ್) ನಿಯಂತ್ರಕಗಳಂತೆ ಉಪಯೋಗಿಸಬಹುದು. ಕುಲುಮೆಯಲ್ಲಿ ಉಷ್ಣತೆ ನಿರ್ದಿಷ್ಟ ಬೆಲೆಗಿಂತ ಕಡಿಮೆಯಾದರೆ ಸ್ವಿಚ್ ಸ್ವಯಂಚಾಲಿತವಾಗಿ ಮುಚ್ಚಿ ವಿದ್ಯುತ್ ಶಕ್ತಿಯನ್ನು ಸಂಪರ್ಕಗೊಳಿಸುವುದು. ಉಷ್ಣತೆ ಒಂದು ನಿರ್ದಿಷ್ಟ ಮಟ್ಟವನ್ನು ತಲುಪಿದ ಕೂಡಲೆ ಸ್ವಿಚ್ಚು ತೆರೆದುಕೊಳ್ಳುವುದು. ಇಂಥ ಸ್ವಿಚ್‍ಗಳಿಗೆ ಟಪ್ಪೆಗಳೆಂದು ಹೆಸರು. ಅಲ್ಪ ಕಾಲಾವಧಿ ಬೆಸುಗೆಗಳ ನಿಯಂತ್ರಣ ಪರ್ಯಾಯ ವಿದ್ಯುತ್ ದಿಷ್ಟಕರಣ(ರೆಕ್ಟಿಫಿಕೇಶನ್) ಮುಂತಾದವುಗಳಲ್ಲಿ ಈ ರೀತಿಯ ಟಪ್ಪೆಗಳು ಆವಶ್ಯಕ. ಇವುಗಳ ರಚನೆಯಲ್ಲಿ ಥೈರಾಟ್ರಾನುಗಳನ್ನು ಉಪಯೋಗಿಸುವರು. 

	ಪರ್ಯಾಯ ವಿದ್ಯುತ್ತನ್ನು ಆರೋಪಿಸಿದರೆ ಆ್ಯನೋಡ್ ವೋಲ್ಟೇಜ್ ಧನವಾಗಿರುವಾಗ ಮಾತ್ರ ಥೈರಟ್ರಾನಿನಲ್ಲಿ ವಿದ್ಯುದ್ವಹನವಿರುತ್ತದೆ. ಎರಡನೆಯ ಅರ್ಧದಲ್ಲಿಯೂ(ಋಣಭಾಗ) ವಿದ್ಯುದ್ವಹನ ಪಡೆಯಲು ಎರಡು ಥೈರಟ್ರಾನುಗಳನ್ನು ಬಳಸಬೇಕು. ಆಗ ಒಂದು ಥೈರಟ್ರಾನಿನಲ್ಲಿ ಒಂದು ದಿಶೆಯಲ್ಲಿ ವಿದ್ಯುತ್ ಪ್ರವಹಿಸಿದರೆ ಇನ್ನೊಂದರಲ್ಲಿ ವಿರುದ್ಧ ದಿಶೆಯಲ್ಲಿ ಪ್ರವಾಹವಿರುವುದು. ಥೈರಾಟ್ರಾನಿನ ಜಾಲದ ಮೇಲೆ, ಅತಿಋಣ ವೋಲ್ಟೇಜಿನಿಂದ ಸೊನ್ನೆಗೆ, ಮೋಲ್ಟೇಜನ್ನು ಬದಲಾಯಿಸುತ್ತಿದ್ದರೆ ನಳಿಕೆಯಲ್ಲಿ ಪ್ರವಾಹ ಇಲ್ಲದಿರುವ ಸ್ಥಿತಿಯಿಂದ ವಹನ ಸ್ಥಿತಿಗೆ ತರಬಹುದು. ಅಂದರೆ ಥೈರಾಟ್ರಾನಿನಲ್ಲಿ ಪ್ರವಾಹವನ್ನು ಹರಿಸಬಹುದು ಅಥವಾ ಕಡಿಯಬಹುದು. 

	ಥೈರಟ್ರಾನನ್ನು ಸತತವಾಗಿ ಉಪಯೋಗಿಸುವಾಗ ಧನ ಅಯಾನುಗಳ ಸಾಂದ್ರತೆ ಕ್ಯಾಥೋಡಿನ ಹತ್ತಿರ ಸಾಕಷ್ಟು ಪ್ರಮಾಣದಲ್ಲಿ ಇರುತ್ತದೆ. ಇವು ಕ್ಯಾಥೋಡಿನ ಲೇಪನವನ್ನು ಸಿಡಿದು ಹಾರುವಂತೆ ಮಾಡುವುವು. ನಳಿಕೆ ಸಾಕಷ್ಟು ಉಷ್ಣತೆಗೆ ಬರುವ ಮುನ್ನವೇ ಆ್ಯನೋಡಿನ ಮೇಲೆ ವೋಲ್ಟೇಜನ್ನು ಆರೋಪಿಸಿದರೆ ಈ ಸಿಡಿತ ಹೆಚ್ಚುತ್ತದೆ. ಅಯಾನೀಕರಣ ಹಾಗೂ ನಿರಯಾನೀಕರಣ ನಿರ್ದಿಷ್ಟ ಕಾಲಾವಧಿ ತೆಗೆದುಕೊಳ್ಳುವುದರಿಂದ ಥೈರಾಟ್ರಾನುಗಳನ್ನು 1 ಸೆಕೆಂಡಿನಲ್ಲಿ ಗರಿಷ್ಠ ಸಂಖ್ಯೆಗಿಂತ ಹೆಚ್ಚು ಸಾರಿ ಕೆಲಸ ಮಾಡುವಂತೆ ಮಾಡಲು ಸಾಧ್ಯವಿಲ್ಲ. ಸಿಡಿತದಿಂದ ನಳಿಕೆಯನ್ನು ಉಪಯೋಗಿಸಬಹುದಾದ ಒಟ್ಟು ಕಾಲ ಕಡಿಮೆಯಾಗುವುದು. ನಿಖರವಾದ ನಿಯಂತ್ರಣದ ಅತಿ ಶೀಘ್ರ ನಿರಯಾನೀಕರಣ ಮತ್ತು ಅತ್ಯಲ್ಪ ಕಾಲದಲ್ಲಿ ಅತಿ ಹೆಚ್ಚಿನ ಪ್ರವಾಹ ಬೇಕಾದರೆ ನಳಿಕೆಯಲ್ಲಿ ಹೈಡ್ರೊಜನ್ನನ್ನು ಬಳಸುವರು. ಸಾಮಾನ್ಯವಾಗಿ ನಳಿಕೆಗಳಲ್ಲಿ ನಿಯಾನ್, ಕ್ಸೆನಾನ್ ಮುಂತಾದ ಅನಿಲಗಳನ್ನು ಉಪಯೋಗಿಸುತ್ತಾರೆ.
(ಪಿ.ವಿ.)

	ಅರೆವಾಹಕಗಳಾದ ಸಿಲಿಕಾನ್, ಜರ್ಮೇನಿಯಮ್, ಗಾಲಿಯಮ್, ಆರ್ಸೆನೈಡ್ ಬಳಕೆಯಿಂದ ನಿರ್ಮಾಣಗೊಂಡಿರುವ ಟ್ರಾನ್ಸಿಸ್ಟರ್ ಬಳಕೆ ವ್ಯಾಪಕವಾದಂತೆ ಥೈರಟ್ರಾನ್‍ಗಳಂಥ ನಿರ್ವಾತ ನಳಿಕೆಗಳ ಬಳಕೆ ಈಗ ಹೆಚ್ಚಾಗಿಲ್ಲ.
(ಪರಿಷ್ಕರಣೆ: ಹೆಚ್.ಆರ್.ಆರ್)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ